ಶ್ರೀರಂಗಂ ಶ್ರೀನಿವಾಸರಾವ್
	1910-83. ತೆಲುಗಿನಲ್ಲಿ ಶ್ರೀಶ್ರೀ ಎಂಬ ಕಾವ್ಯನಾಮದಿಂದ ಹೆಸರಾದ ಪ್ರಸಿದ್ಧ ಕವಿ. 1910 ಜನವರಿ 2ರಂದು ವಿಶಾಖಪಟ್ಟಣದಲ್ಲಿ ಜನಿಸಿದರು. ತಂದೆ ವೆಂಕಟರಮಣಯ್ಯ. ವಿಶಾಖ ಪಟ್ಟಣದಲ್ಲಿ ಪ್ರಾಥಮಿಕ, ಪ್ರೌಢಶಿಕ್ಷಣ ಮುಗಿಸಿ (1915-25) ಮದರಾಸಿನ ಕ್ರಿಶ್ಚಿಯನ್ ಕಾಲೇಜಿನಲ್ಲಿ ಬಿ.ಎ. (ಪ್ರಾಣಿವಿಜ್ಞಾನ) ಪದವಿ ಪಡೆದರು (1931). ಎಂಟನೆಯ ವಯಸ್ಸಿನಲ್ಲೇ ಚಿಕ್ಕಚಿಕ್ಕ ಪದ್ಯಗಳನ್ನು ರಚಿಸುತ್ತಿದ್ದ ಬಾಲಕನಿಗೆ ಗುರು ವದ್ದಿ ಕೇಶವ ರಾವ್ ನಾಯುಡು ಪ್ರೋತ್ಸಾಹ ನೀಡಿ ಪ್ರತಿಭೆಯ ಅಭಿವ್ಯಕ್ತಿಗೆ ಮಾರ್ಗದರ್ಶಕರಾದರು. ಅನಂತರ ಕೊಂಪೆಲ್ಲ ಜನಾರ್ದನ ರಾವ್, ಬಸವರಾಜು, ನಂದೂರಿ, ಮಲ್ಲಂಪಲ್ಲಿ, ವೇಟೂರಿ, ಮುದ್ದುಕೃಷ್ಣ, ಮಲ್ಲವರಪು, ಗನ್ನವರಪು ಮೊದಲಾದ ಸಾಹಿತಿಗಳು ಇವರ ಮೇಲೆ ಅಪಾರ ಪ್ರಭಾವ ಬೀರಿದರು. ತಾವು ಓದಿದ ಕಾಲೇಜಿನಲ್ಲಿ ಡೆಮಾನ್‍ಸ್ಟ್ರೇಟರ್ ಆಗಿ ಕೆಲಸ ಆರಂಭಿಸಿ (1931-32), ಮದರಾಸಿನಲ್ಲಿ ಆಂಧ್ರಪ್ರಭ ಎಂಬ ತೆಲುಗು ಪತ್ರಿಕೆಯ ಉಪಸಂಪಾದಕರಾಗಿ (1938), ನವದೆಹಲಿಯ ಆಕಾಶವಾಣಿ ನಿಲಯದಲ್ಲಿ ಸೇವೆ ಸಲ್ಲಿಸಿ (1942), ಲಕ್ನೋದ ಮಿಲಿಟರಿ ಕಚೇರಿಯಲ್ಲಿ ಲ್ಯಾಬೊರೇಟರಿ ಅಸಿಸ್ಟೆಂಟ್ ಆಗಿ, ನಿಜಾಂ ನವಾಬ್ ಅವರ ರಿಫಾರಂ ಸೆಕ್ರೆಟೇರಿಯಟ್‍ನಲ್ಲಿ ಉದ್ಯೋಗಿಯಾಗಿ ವೃತ್ತಿಜೀವನ ನಡೆಸಿದರು. 

	ಇವರು ಹತ್ತುವರ್ಷದವರಾಗಿದ್ದಾಗ ವೀರಸಿಂಹ-ವಿಜಯಸಿಂಹುಲು ಎಂಬ ಕಾದಂಬರಿಯನ್ನು ಬರೆದರು. ಅನಂತರ ಸಾವಿತ್ರಿ-ಸತ್ಯವಂತುಲು (ಪದ್ಯನಾಟಕ, 1922), ಪರಿಣಯ ರಹಸ್ಯಮು (1925), ಸುಪ್ತಾಸ್ಥಿಕಲು (1929) ಕೃತಿಗಳು ಬಂದುವು. ಇವರಿಗೆ ತೆಲುಗು, ಇಂಗ್ಲಿಷ್ ಭಾಷೆಗಳಲ್ಲಿ ಸಮಾನ ಪಾಂಡಿತ್ಯವಿತ್ತು.

	ಶ್ರೀಶ್ರೀ ಅವರು ಪ್ರಭವ ಎಂಬ ಕವನ ಸಂಕಲನದ ಮೂಲಕ ತೆಲುಗು ಕಾವ್ಯಕ್ಷೇತ್ರಕ್ಕೆ ಕಾಲಿಟ್ಟರು(1928). ಇದರಲ್ಲಿ ಪ್ರಕೃತಿಗೀತೆ, ಪ್ರಣಯಗೀತೆ, ಪ್ರಕೀರ್ಣಗೀತೆ ಎಂಬ ಮೂರು ಭಾಗಗಳಿವೆ. ತೆಲುಗಿನ ರಮ್ಯ ಕಾವ್ಯ (ಭಾವ ಕವಿತ್ವ) ಧೋರಣೆ ಶ್ರೀಶ್ರೀ ಸೇರಿದಂತೆ ಆ ಕಾಲದ (1910-30) ಎಲ್ಲ ಕವಿಗಳ ಮೇಲೂ ಪ್ರಭಾವ ಬೀರಿತು. ಇವರು ಇಂಥ ಪ್ರಭಾವಗ ಳಿಂದ ಬಿಡಿಸಿಕೊಂಡು ವಾಸ್ತ ವಿಕ ಧೋರಣೆಯ ಕಡೆಗೆ ಹೊರಳಿದ್ದು (1929) ತೆಲುಗು ಸಾಹಿತ್ಯದ ಹೊಸ ತಿರುವಿಗೆ ಕಾರಣವಾಯಿತು. 

	ಮಹಾಪ್ರಸ್ಥಾನಂ(1950) ಹೆಸರಿನಲ್ಲಿ ಪ್ರಕಟಿಸಿದ ಕವನಗಳು 20ನೆಯ ಶತಮಾನದ ನಾಲ್ಕನೆಯ ದಶಕದ ತೆಲುಗು ಕಾವ್ಯಧೋರಣೆಯನ್ನು ಪ್ರತಿನಿಧಿಸುತ್ತವೆ. ಈ ಕೃತಿ ಕನ್ನಡವೂ ಸೇರಿದಂತೆ ಅನೇಕ ಭಾಷೆಗಳಿಗೆ ಅನುವಾದಗೊಂಡಿದೆ (ತೆಲುಗಿನಲ್ಲಿ 30ಕ್ಕೂ ಹೆಚ್ಚುಸಲ ಮರುಮುದ್ರಣ ಗೊಂಡು ಸುಮಾರು ಒಂದೂವರೆ ಲಕ್ಷ ಪ್ರತಿಗಳು ಮಾರಾಟವಾಗಿವೆ). ಇಲ್ಲಿಯ ಕವನಗಳು ತೆಲುಗು ಸಾಹಿತ್ಯಕ್ಷೇತ್ರದಲ್ಲಿ ಪ್ರಚಂಡ ಅಲೆಯೆಬ್ಬಿಸಿ ಯುವಕವಿಗಳನ್ನು ಹುರಿದುಂಬಿಸಿವೆ. ಶ್ರೀಶ್ರೀ ಅವರು ಕಾವ್ಯದಲ್ಲಿ ಹೊಸಧೋರಣೆಗೆ ನಿರ್ದೇಶನ ನೀಡಿದ್ದಲ್ಲದೆ, ಆ ಧೋರಣೆಯನ್ನೇ ರಚನೆಯ ಮೂಲಕ ತೋರಿಸಿಕೊಟ್ಟರು. ತೆಲುಗಿನ ಪ್ರಗತಿಶೀಲ ಪಂಥದ ಮುಖಂಡರಾದ ಇವರು ಕವಿತೆ ಓ ಕವಿತೆ ಎಂಬ ಕವನದಲ್ಲಿ ನನ್ನ ಬರೆಹಗಳಲ್ಲಿ ಪ್ರಪಂಚ ಪ್ರತಿಫಲಿಸಿ, ನನ್ನ ತಪಸ್ಸು ಫಲಿಸಿ... ನನ್ನ ನಾಡಜನ ಹಾಡುವ ಮಂತ್ರವಾಗಬೇಕು ಎಂದು ಆಶಿಸಿದ್ದಾರೆ. ಇವರ ಕಾವ್ಯದಲ್ಲಿ ವಸ್ತುವೈವಿಧ್ಯ, ಬಡಿದೆಬ್ಬಿಸುವ ಪದವಿನ್ಯಾಸ, ಕಾವ್ಯಲಕ್ಷಣ ವಿವೇಚನೆ, ಪ್ರಗತಿಪರ ಧೋರಣೆಗಳಿವೆ. ತೆಲುಗಿನ ಪ್ರಗತಿಶೀಲ ಸಾಹಿತ್ಯ ಚಳವಳಿಯಲ್ಲಿ ಬಂದ ಅಭ್ಯುದಯ ಕಾವ್ಯದ ಪ್ರವರ್ತಕರು ಇವರು. ಕಾವ್ಯಮಾಧ್ಯಮದಲ್ಲಿ ಹಲವು ಹೊಸ ಪ್ರಯೋಗಗಳನ್ನು ಮಾಡಿದರು. 

	ಖಡ್ಗಸೃಷ್ಟಿ ಎಂಬ ಕವನಸಂಕಲನದಲ್ಲಿ ಅಧಿವಾಸ್ತವಿಕ ಧೋರಣೆಯ ಅನೇಕ ಕವನಗಳಿವೆ. ಪಾಶ್ಚಾತ್ಯ ಕಾವ್ಯಪ್ರಪಂಚದಲ್ಲಿ ನವ್ಯತೆಗೆ ಕಾರಣರಾದ ಅನೇಕ ಕವಿಗಳ ರಚನೆಗಳನ್ನು ತೆಲುಗರಿಗೆ ಪರಿಚಯಿಸಿದರು. ಇವರು ಸದಾ ಹೊಸತನವನ್ನೂ ಪ್ರಗತಿಪರ ಧೋರಣೆಗಳನ್ನೂ ಸ್ವಾಗತಿಸುತ್ತಿದ್ದರು. ದಿಗಂಬರ ಕಾವ್ಯ ಆರ್ಭಟದಿಂದ ಪ್ರಕಟಗೊಂಡಾಗ, ಅದರ ಹಿಂದೆ ಇರುವ ಸಾಮಾಜಿಕ ಕಳಕಳಿಯನ್ನು ಅರ್ಥಮಾಡಿಕೊಂಡರು. ಕೆಲವು ದಿಗಂಬರ ಕವನಗಳನ್ನು ಇಂಗ್ಲಿಷಿಗೆ ಅನುವಾದಿಸಿದರು. ಪ್ರಗತಿಪರ ಚಿಂತಕರೆಲ್ಲ ಸೇರಿ ವಿಪ್ಲವ ರಚಯಿತಲ ಸಂಘಂ (ಕ್ರಾಂತಿಕಾರಿ ಲೇಖಕರ ಸಂಘ) ಸ್ಥಾಪಿಸಿದಾಗ (1970) ಶ್ರೀಶ್ರೀ ಅದರ ಅಧ್ಯಕ್ಷರಾದರು. ಅಲ್ಲಿಂದ ಇವರ ಕಾವ್ಯ ಕ್ರಾಂತಿಕಹಳೆಯನ್ನು ಮೊಳಗಿಸುವ ಕಾರ್ಯ ಕೈಗೊಂಡಿತು. ಆ ಸಂದರ್ಭದ ಕವನಗಳೇ ಮರೋಪ್ರಸ್ಥಾನಂ (ರಚನೆ 1976-83) ಸಂಕಲನ. ಕರ್ನಾಟಕದಲ್ಲಿ (ಬೆಂಗಳೂರು) ಕನ್ನಡ ಬಂಡಾಯ ಸಾಹಿತ್ಯ ಸಂಘಟನೆ ಆರಂಭಗೊಂಡಾಗ ಶ್ರೀಶ್ರೀ ಅವರು ಅದರ ಉದ್ಘಾಟನಾ ಭಾಷಣ ಮಾಡಿದರು (1979).

	ಇವರ ಷಷ್ಟಿಪೂರ್ತಿ ಸಂದರ್ಭದಲ್ಲಿ ಇವರ ಸಾಹಿತ್ಯದ 6 ಸಂಪುಟ ಗಳು ಪ್ರಕಟಗೊಂಡಿವೆ (1970). ಇದರಲ್ಲಿ 6ನೆಯದು ಇಂಗ್ಲಿಷ್ ರಚನೆಗಳ ಸಂಪುಟ. ಇವರ ಕಾವ್ಯ, ಕಾದಂಬರಿ, ನಾಟಕ, ಸಣ್ಣಕಥೆ, ಲಲಿತ ಪ್ರಬಂಧ, ವಿಮರ್ಶೆ, ರಾಜಕೀಯ ರಚನೆಗಳು, ಸಿನಿಮಾ ಹಾಡುಗಳು, ಚುಟುಕಗಳು, ನಗೆಬರೆಹಗಳು, ಪ್ರವಾಸಕಥನ, ರೇಡಿಯೊ ನಾಟಕಗಳು ಮೊದಲಾದವುಗಳನ್ನು ಶ್ರೀಶ್ರೀ ಸಂಪೂರ್ಣ ಸಾಹಿತ್ಯ ಎಂಬ ಹೆಸರಿನಲ್ಲಿ ಬಿಡಿಬಿಡಿಯಾಗಿ 20 ಸಂಪುಟಗಳಲ್ಲಿ ವಿರಸಂ ಎಂಬ ಪ್ರಕಾಶನ ಸಂಸ್ಥೆ ಪ್ರಕಟಿಸಿದೆ. ಚಲನಚಿತ್ರಗೀತಕಾರರಾಗಿ ಅನೇಕ ಜನಪ್ರಿಯ ಗೀತೆಗಳನ್ನೂ ರಚಿಸಿದ್ದಾರೆ. ಅಲ್ಲೂರಿ ಸೀತಾರಾಮರಾಜು ಚಿತ್ರಕ್ಕೆ ರಚಿಸಿದ ತೆಲುಗುವೀರ ಲೇವರಾ ಎಂಬ ಗೀತೆ ರಾಷ್ಟ್ರಪ್ರಶಸ್ತಿ ಪಡೆದಿದೆ.

	ಅನಂತಂ ಎಂಬುದು ಇವರ ಆತ್ಮಕಥನ(1986). ಇವರ ನಿಧನಾನಂತರ ಪ್ರಕಟಗೊಂಡು ಸಾಹಿತ್ಯವಲಯದಲ್ಲಿ ಅನೇಕ ವಾದವಿವಾದಗಳನ್ನು ಸೃಷ್ಟಿಸಿತು. ಇವರು ಇದನ್ನು ಆತ್ಮಚರಿತ್ರಾತ್ಮಚರಿತ್ರಾತ್ಮಕ ಕಾದಂಬರಿ ಎಂದು ಕರೆದಿದ್ದಾರೆ.

	ಇವರಿಗೆ ಅನೇಕ ಪ್ರತಿಷ್ಠಿತ ಗೌರವಗಳೂ ಪ್ರಶಸ್ತಿ ಬಹುಮಾನಗಳೂ ಸನ್ಮಾನಗಳೂ ದೊರೆತಿವೆ. ಸಂಯುಕ್ತ ಮದರಾಸು ರಾಜ್ಯ ವಿಧಾನ ಪರಿಷತ್ತಿನ ಸದಸ್ಯತ್ವ (1953), ಹೆಲ್ಸಿಂಕಿಯಲ್ಲಿ ನಡೆದ ಪ್ರಪಂಚ ಶಾಂತಿ ಮಹಾಸಭೆಗೆ ಭಾರತದ ಪ್ರತಿನಿಧಿ (1954), ಹೈದರಾಬಾದಿನ ವಿಶಾಲಾಂಧ್ರ ಸದಸ್ಯರ ಸಭೆಯ ಅಧ್ಯಕ್ಷಸ್ಥಾನ (1955), ಕೇಂದ್ರ ಸಾಹಿತ್ಯ ಅಕಾಡೆಮಿ ಸದಸ್ಯತ್ವ (1956); ಸೋವಿಯಟ್ ಲ್ಯಾಂಡ್ ನೆಹರೂ ಬಹುಮಾನ (1966), ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ (1973), ಮದರಾಸಿನ ರಾಜಲಕ್ಷ್ಮಿ ಫೌಂಡೇಶನ್ ಅವರ ಮೊತ್ತಮೊದಲ ಬಹುಮಾನ (1979), ಲಂಡನ್ ಕಾಮನ್‍ವೆಲ್ತ್ ಇನ್‍ಸ್ಟಿಟ್ಯೂಟಿನಲ್ಲಿ ಮಹಾಕವಿ ಜಾರ್ಜ್ ಬಾರ್ಕರ್ ಅವರ ಅಧ್ಯಕ್ಷತೆಯಲ್ಲಿ ಸನ್ಮಾನ (1980)-ಇವುಗಳನ್ನು ಹೆಸರಿಸಬಹುದು. ಇವರು 1983 ಜೂನ್ 15ರಂದು ನಿಧನರಾದರು.						

				(ಆರ್.ವಿ.ಎಸ್.ಎಸ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ